ದೇವಗಢ
ಈ ಹೆಸರಿನ ನಾಲ್ಕು ಸ್ಥಳಗಳಿವೆ.  ಮೊದಲನೆಯ ದೇವಗಢ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಲಲಿತಪುರದಿಂದ ಸುಮಾರು 20 ಮೈ.  ಮತ್ತು ಜಾಖ್‍ಲೌನ್ ರೈಲ್ವೆ ನಿಲ್ದಾಣದಿಂದ ಸುಮಾರು 8 ಮೈ.  ದೂರದಲ್ಲಿ, ಬೇತ್‍ವಾ ನದಿಯ ಬಲತೀರದಲ್ಲಿದೆ.  ಇಲ್ಲಿ ಅರಣ್ಯ ಇಲಾಖೆಗೆ ಸೇರಿದ ವಿಶ್ರಾಂತಿ ಗೃಹವೊಂದಿದೆ.  ಜೈನರ ಧರ್ಮಶಾಲೆಗಳೂ ಇವೆ.  ಪ್ರವಾಸಿಗಳಿಗೆ ಇವುಗಳಲ್ಲಿ ವಸತಿ ಸೌಕರ್ಯ ದೊರೆಯುತ್ತದೆ. 

ಇಲ್ಲಿಯ ಪ್ರಾಚೀನ ಸ್ಮಾರಕಗಳು ಗಮನಾರ್ಹವಾದವು.  1917-18ರಲ್ಲಿ ಇಲ್ಲಿ ನಡೆಸಿದ ಉತ್ಖನನದಿಂದ ಕೆಲವು ದೇವಾಲಯಗಳು ಬೆಳಕಿಗೆ ಬಂದುವು.  1928ರಲ್ಲಿ ಇಲ್ಲಿಯ ಶಿಲ್ಪಗಳ ಸಂಗ್ರಹಣೆಗಾಗಿ ಕಟ್ಟಡವೊಂದನ್ನು ನಿರ್ಮಿಸಲಾಯಿತು.  ಆದರೆ ಉತ್ತಮ ಶಿಲ್ಪಗಳನ್ನೆಲ್ಲ ದೇವಾಲಯದ ಆವರಣದಲ್ಲೆ ಇಟ್ಟಿದೆ.

ದೇವಗಢ ಹಲವು ಶತಮಾನಗಳ ವರೆಗೆ ಹಿಂದೂ ಮತ್ತು ಜೈನ ಕೇಂದ್ರವಾಗಿತ್ತು.  ಸೈಪುರ ಗ್ರಾಮದಿಂದ 3 ಮೈ.  ಪಶ್ಚಿಮದಲ್ಲಿರುವ ಪರ್ವತದ ಮೇಲೆ ಚತುರಸ್ರಾಕಾರದ ಕೋಟೆ, ಕೆಳಗಿನ ಮೈದಾನದಲ್ಲಿ ಗುಪ್ತಕಾಲದ ಭಗ್ನ ದೇವಾಲಯ, ಇಲ್ಲಿಂದ ಒಂದು ಫರ್ಲಾಂಗ್ ದೂರದಲ್ಲಿರುವ ವರಾಹ ಮಂದಿರ, ಅದರ ಬಳಿ ಹರಡಿರುವ ಕೋಟೆಯ ಅವಶೇಷಗಳು, ದುರ್ಗವೊಂದರ ವಿಶಾಲ ಆವರಣದಲ್ಲಿರುವ ಜಿನಮಂದಿರಗಳು ಹಾಗೂ ಭವನಗಳು ಮುಂತಾದ ಸ್ಮಾರಕಗಳು ಮತ್ತು ಅವಶೇಷಗಳು ಇಲ್ಲಿವೆ.  ಇಲ್ಲಿ ಒಟ್ಟು ಸುಮಾರು 300  ಶಾಸನಗಳು ದೊರೆತಿವೆ.  ಅವು 6 ನೆಯ ಶತಮಾನದಿಂದ 18  ನೆಯ ಶತಮಾನದ ವರೆಗಿನ ಕಾಲದವಾಗಿವೆ.  ಅವುಗಳಲ್ಲಿ ಋಷಭದೇವನ ಪುತ್ರಿ ಬ್ರಾಹ್ಮಿಯ ಅಂಕಿತವುಳ್ಳ ಶಾಸನ ಹಾಗೂ ಚಂದೇಲ ವಂಶದ ಅರಸರ ಶಾಸನಗಳು ಮಹತ್ತ್ವದವಾಗಿವೆ.  

ದೇವಗಢದ ಪ್ರಮುಖ ಸ್ಮಾರಕವೆಂದರೆ ನದಿಯ ತೀರದ ಬಳಿ ಇರುವ ಗುಪ್ತಕಾಲದ ದೇವಾಲಯ.  ಇದು ತನ್ನ ವಿಶಿಷ್ಟ ವಾಸ್ತುಶಿಲ್ಪಲಕ್ಷಣಗಳಿಂದಾಗಿ ಭಾರತದ ಉತ್ತಮ ಸ್ಮಾರಕಗಳಲ್ಲೊಂದೆನಿಸಿದೆ.  ಇದರ ಬಳಿ ಚೌಕಾಕಾರದ ಕಲ್ಲಿನ ದೋಣಿ ಇರುವುದರಿಂದ ಇದು ಸಾಗರ್ ಮರ್ ಎಂಬ ಹೆಸರಿನಿಂದ ಸ್ಥಳೀಯವಾಗಿ ಪರಿಚಿತವಾಗಿದೆ.  ಇದು ವಿಷ್ಣು ದೇವಾಲಯವೆಂಬುದನ್ನು ಕೆಲವು ವಿದ್ವಾಂಸರು ಒಪ್ಪಿದ್ದಾರೆ.  ದೇವಾಲಯದ ಅಧಿಷ್ಠಾನದ ಅನೇಕ ಪಟ್ಟಿಕೆಗಳ ಮೇಲೆ ರಾಮಾಯಣಕ್ಕೆ ಸಂಬಂಧಿಸಿದ ಶಿಲ್ಪಗಳಿವೆ.  ರಾಮ, ನರ, ನಾರಾಯಣರ ಶಿಲ್ಪಗಳ ಜೊತೆಗೆ ನೃಸಿಂಹ, ವಾಮನ, ಬಲರಾಮ ಮತ್ತು ಕೃಷ್ಣಾವತಾರಗಳಿರುವ ಶಿಲ್ಪಗಳೂ ಇವೆ.  ವಿಷ್ಣುವಿನ ಉಳಿದ ಅವತಾರಗಳ ಶಿಲ್ಪಗಳು ಕಾಣೆಯಾಗಿರಬೇಕು.  ಗರ್ಭಗೃಹ ಬಾಗಿಲುವಾಡದ ಮೇಲ್ಭಾಗದಲ್ಲಿ ಆದಿಶೇಷನ ಸುರುಳಿ ಸಿಂಬಿಗಳ ಮೇಲೆ ಕುಳಿತಿರುವ ವಿಷ್ಣು ಶಿಲ್ಪವುಂಟು.  ಅಲ್ಲದೆ ಮೊದಲು ಈ ದೇವಾಲಯದ ಆವರಣಕ್ಕೆ ಸೇರಿದ್ದು ಈಗ ಉಗ್ರಾಣದಲ್ಲಿಟ್ಟಿರುವ ಸ್ತಂಭವೊಂದರ ಮೇಲೆ ಕೆತ್ತಿರುವ ಗುಪ್ತಲಿಪಿಯ ಶಾಸನವೊಂದರಲ್ಲಿ ಕೇಶವಪುರದ ಭಗವಂತನ ಭಕ್ತನಾದ ಭಾಗವತ ಗೋವಿಂದನೆಂಬವನ ಉಲ್ಲೇಖವಿದೆ.  ಇವುಗಳಿಂದ ಈ ದೇವಾಲಯ ವಿಷ್ಣುವಿಗಾಗಿ ಕಟ್ಟಿದ, ಭಾಗವತ ಪಂಥಕ್ಕೆ ಸೇರಿದ ದೇವಾಲಯವೆಂಬುದು ಸ್ಪಷ್ಟಪಡುತ್ತದೆ.  ಇದು ಈಗ ದಶಾವತಾರ ದೇವಾಲಯವೆಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ಈ ದೇವಾಲಯದ ಕಾಲ 6 ನೆಯ ಶತಮಾನವೆಂದು ಭಾವಿಸಲಾಗಿದೆ.  ಗುಪ್ತವಾಸ್ತುಶಿಲ್ಪ ಪೂರ್ಣ ವಿಕಾಸ ಸ್ಥಿತಿಯನ್ನು ಮುಟ್ಟಿದ್ದ ಕಾಲ ಅದು.  ಇತರ ಗುಪ್ತ ದೇವಾಲಯಗಳಲ್ಲಿರುವಂತೆ ಗರ್ಭಗೃಹದ ಸುತ್ತ ಇಲ್ಲಿಯೂ ಪ್ರದಕ್ಷಿಣಪಥ ಇದ್ದಿರಬೇಕು.  ಈ ದೇವಾಲಯಕ್ಕೆ ನಾಲ್ಕು ಪ್ರವೇಶದ್ವಾರಗಳಿದ್ದುವು.  ಅವುಗಳ ಮುಂದೆ ಚಿಕ್ಕ

 ಮಂಟಪ ಹಾಗೂ ಸೋಪಾನಗಳಿದ್ದುವು.  ನಾಲ್ಕು ಮೂಲೆಗಳಲ್ಲಿ ಅನಂತರದ ಕಾಲಕ್ಕೆ ಸೇರಿದ ನಾಲ್ಕು ಮಂದಿರಗಳಿದ್ದುವು.  ಇವುಗಳ ಶಿಖರಗಳು ಅಲಂಕೃತವಾಗಿವೆ. ಗುಪ್ತಕಾಲಕದ ಸ್ತಂಭ ಗಮನಾರ್ಹವಾದ್ದು.  ಇದರ ದಂಡದ ಅರ್ಧ ಅಥವಾ ಮುಕ್ಕಾಲು ಭಾಗ ಅಲಂಕೃತ ಗೋಲಪಟ್ಟಿಕೆಗಳಿಂದ ಕೂಡಿದೆ. ಶೀರ್ಷ ಅಥವಾ ಆಧಾರ ಭಾಗದಲ್ಲಿ ಪುಷ್ಟಪಾತ್ರೆಗಳ ವಿನ್ಯಾಸಗಳನ್ನು ಬಿಡಿಸಿದೆ. ಚೈತ್ಯದ ವಾತಾಯನದ ಸುತ್ತ ಅನೇಕ ಬಗೆಯ ಚಿತ್ರಗಳನ್ನು ಕೆತ್ತಿರುವುದು ಇಲ್ಲಿಯ ಇನ್ನೊಂದು ವಿಶೇಷ.  ಈ ಚಿತ್ರಗಳಲ್ಲಿ ಪ್ರವೇಶ ದ್ವಾರಗಳನ್ನು ಇಲ್ಲವೆ ಮೂರ್ತಿಗಳನ್ನಿಡುವಂತೆ ಗೂಡುಗಳನ್ನು ಕೊರೆಯಲಾಗಿದೆ.  ಸಾರನಾಥ ಶಿಲ್ಪಕಲೆಯ ವಿಶೇಷವಾದ ಸ್ವಸ್ತಿಕ ಆಕಾರದ ಮೇಲ್ಭಾವುಗಳ್ಳಸ್ತಂಭಗಳನ್ನು ಚೈತ್ಯ ವಾತಾಯನದ ಸುತ್ತ ಕೆತ್ತಿದ.  ಈ ದೇವಾಲಯದ ಶಿಖರ ಐತಿಹಾಸಿಕ ಮಹತ್ತ್ವ ಉಳ್ಳದ್ದು.  ಪೂರ್ವಗುಪ್ತರ ಕಾಲದಲ್ಲಿ ಶಿಖರಗಳು ಇರಲಿಲ್ಲ.  ಇಲ್ಲಿಯ ಶಿಖರ ಹೆಚ್ಚು ಎತ್ತರವಿರಲಿಲ್ಲ.  ಆದರೆ ಇದರಲ್ಲಿ ಕ್ರಮವಾಗಿ ವರ್ತುಲಗಳನ್ನು ಕೆತ್ತಿದೆ.  ಈಗ ಉಳಿದಿರುವುದು ಕೇವಲ ಕೆಳಭಾಗದ ವರ್ತುಲವಾದರೂ ಹಿಂದೆ ಇದ್ದ ಇಡೀ ಗೋಪುರದ ಚಿತ್ರ ನಮಗೆ ಲಭಿಸುತ್ತದೆ.  ಗೋಪುರ ಪಿರಮಿಡಿನಾಕಾರದಲ್ಲಿತ್ತು.  ಇದಕ್ಕೆ, ಮೇಲೇರಿದಂತೆ ಕ್ರಮವಾಗಿ ಚಿಕ್ಕವಾಗುವ ಮೂರು ಅಂತಸ್ತುಗಳಿದ್ದುವು.  ಎರಡು ಅಂತಸ್ತುಗಳಿಂದ ಕೂಡಿದ ನಾಚನಾಕುಠಾರದ ಪಾರ್ವತಿ ದೇವಾಲಯ ಮತ್ತು ಐಹೊಳೆಯ ಲಾಡಖಾನ್ ದೇವಾಲಯಗಳ ಮುಂದಿನ ಘಟ್ಟ ಇದು ಎಂದು ಹೇಳಬಹುದು.  ಮಹಾಬಲಿಪುರದ ಶಿಲ್ಪದ ರಥದ ತುದಿಗಳಲ್ಲಿರುವಂತೆ ಗೋಪುರದ ಆಧಾರ ಭಾಗದ ನಾಲ್ಕು ಕಡೆಯಲ್ಲೂ ಪ್ರದಕ್ಷಿಣಪಥದ ಚಪ್ಪಟೆಯಾದ ಚಾವಣಿಗಳೂ ಅವುಗಳ ಕೊನೆಯಲ್ಲಿ ಚಿಕ್ಕ ಇಲ್ಲವೇ ದೊಡ್ಡ ಚೈತ್ಯದ ಕಿಟಕಿಗಳೂ ಇದ್ದುವು.  ದ್ವಾರಮಂಟಪ ಎರಡು ದೊಡ್ಡ ಸ್ತಂಭಗಳನ್ನು ಆಧರಿಸಿತ್ತು.  ಪ್ರವೇಶದ್ವಾರದಲ್ಲಿ ಕಲ್ಲಿನ ಚೌಕಟ್ಟುಗಳಿದ್ದುವು.  ಅವುಗಳ ಮೇಲೆ ಅನೇಕ ದೇವತೆಗಳನ್ನೂ ಗಂಗಾಯಮುನಾ ಮೂರ್ತಿಗಳನ್ನೂ ಕೆತ್ತಿದೆ.  ದೇವಾಲಯದ ಹೊರಗೋಡೆಯ ಅನೇಕ ಪಟ್ಟಿಕೆಗಳ ಮೇಲೆ ರಾಮಾಯಣ ಭಾಗವತಗಳಿಗೆ ಸಂಬಂಧಿಸಿದ ಶಿಲ್ಪಗಳಿವೆ. 
ಗುಪ್ತ ದೇವಾಲಯದ ಆವರಣದಲ್ಲಿ ಕೆಲವು ಹಿಂದೂ ದೇವಾಲಯಗಳನ್ನು ಉತ್ಖನನ ಮಾಡಲಾಗಿದೆ.  ಇದರ ಸಮೀಪದ ದಟ್ಟ ಅರಣ್ಯದಲ್ಲಿ ಅಸಂಖ್ಯ ಅವಶೇಷಗಳುಂಟು.  ದೊರೆತಿರುವ ಅವಶೇಷಗಳಲ್ಲಿ ಪ್ರಾಚೀನತಮವಾದವೂ ನಹರ್‍ಘಾಟಿಯ ಸಪ್ತಮಾತೃಕಾ ಉಬ್ಬು ಚಿತ್ರ ಮತ್ತು ಅದರ ಮೇಲಿರುವ ಗುಪ್ತ ಕಾಲದ ಶಾಸನಗಳು, ಸಿದ್ದರಗುಹೆ ಎಂಬ ಅಪೂರ್ಣ ಗುಹೆ.  
ರಾಜಘಾಟಿಯಲ್ಲಿರುವ ಸಪ್ತಮಾತೃಕ ಉಬ್ಬು ಚಿತ್ರ. ಬೆಟ್ಟದ ನೈರುತ್ಯ ಮೂಲಯಲ್ಲಿರುವ ವರಾಹ ದೇವಾಲಯ ಅನಂತರದ ಕಾಲದ್ದು.  ಕರ್ನಾಲಿ ಕೋಟೆಯ ದಕ್ಷಿಣ ಭಾಗದಲ್ಲಿ ಜಿನಮಂದಿರಗಳ ಸಮುದಾಯವಿದೆ.  ಇಲ್ಲಿ ಹೆಚ್ಚಾಗಿ ತೀರ್ಥಂಕರ ಮತ್ತು ಇತರ ನಗ್ನ ಜಿನ ಬಿಂಬಗಳಿವೆ.  ಕೆಲವು ಮೂರ್ತಿಗಳು ಬೃಹತ್ ಪರಿಮಾಣದವು. 

ಇಲ್ಲಿಯ ಮಂದಿರಗಳ ನಿರ್ಮಾಣದಲ್ಲಿ ನಿರ್ದಿಷ್ಟ ಕ್ರಮವೇನೂ ಕಂಡು ಬರುವುದಿಲ್ಲ.  19 ನೆಯ ಶತಮಾನದ ಆರಂಭದ ವರೆಗೂ ಜಿನಮಂದಿರಗಳು ನಿರ್ಮಿತವಾಗಿವೆ.  ಇಲ್ಲಿ ದೊರೆಯುವ ಶಾಸನಗಳಲ್ಲಿ ಮಿಹಿರಭೋಜನ ಶಾಸನ (862), ಚಂದೇಲ ಅರಸ ಕೀರ್ತಿವರ್ಮನ ಶಾಸನ (1097) ಇವನ್ನು ಹೆಸರಿಸಬಹುದು.  ಇಲ್ಲಿಯ ಶಿಲ್ಪಗಳಲ್ಲಿ ಗೊಮ್ಮಟೇಶ್ವರ, ಭರತ, ಚಕ್ರೇಶ್ವರಿ, ಪದ್ಮಾವತಿ, ಜ್ವಾಲಾಮಾಲಿನಿ, ಪಂಚಪರಮೇಷ್ಠಿ ಮತ್ತು ಇತರ ಜೈನ ತಾಂತ್ರಿಕ ಮೂರ್ತಿಗಳೂ ಇವೆ. 
ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲೂ ದೇವಗಢ ಎಂಬ ಒಂದು ಸ್ಥಳವಿದೆ.  ಕುಂಬಲಗಢದಿಂದ ಇದು 4 ಮೈ.  ದೂರದಲ್ಲಿದೆ.  ಇದು ಚೂಡಾವತ್ ಸರದಾರರ ರಾಜಧಾನಿಯಾಗಿತ್ತು.  ಮೇವಾಡದ ಉತ್ತರಾಧಿಕಾರಿ ಕುಮಾರ ಚೂಂಡಾ ಎಂಬಾತ ಇವರ ಪೂರ್ವಜ.  ಪುರಾಣ ಕಾಲದ ಭೀಷ್ಮನಂತೆ ಈತ ತನ್ನ ತಂದೆಗೆ ಮಾರ್ವಾಡದ ರಾಜಕುಮಾರಿಯನ್ನು ವಿವಾಹ ಮಾಡಿಸಿ, ತನ್ನ ಸಿಂಹಾಸನದ ಹಕ್ಕನ್ನು ತ್ಯಾಗ ಮಾಡಿದ.  ತನ್ನ ಬಲಸೋದರ ಮುಕುಲನಿಗೆ ಕಷ್ಟಕಾಲದಲ್ಲಿ ಸಹಾಯ ಮಾಡಿದ.  ಚೂಂಡಾನ ಮೊದಲ ರಾಜಧಾನಿ ದೇವಗಢವಾಗಿತ್ತು. 

ಮಧ್ಯ ಪ್ರದೇಶದ ಛಿಂದವಾಡ ಜಿಲ್ಲೆಯಲ್ಲಿ ಇನ್ನೊಂದು ದೇವಗಢ ಇದೆ.  ಮೊಗಲರ ಕಾಲದಲ್ಲಿ ಇಲ್ಲಿ ರಾಜಗೌಡರ ಆಳ್ವಿಕೆಯಿತ್ತು.  1670ರಲ್ಲಿ ಗೌಂಡರಸ ಕೂರಮಕಲ್ಲ ಕೋಕಶಾಹ್ ಎಂಬಾತನ ಮೇಲೆ ಔರಂಗ್eóÉೀಬ್ ಆಕ್ರಮಣ ಮಾಡಿದ.  ಮೊಗಲ್ ಸೇನಗೆ ಛತ್ರಸಾಲ ಮತ್ತು ಅವರ ಸೋದರ ಅಂಗದ ರಾಯ ಎಂಬ ಹಿಂದೂಗಳ ಸಹಾಯ ದೊರೆಯಿತು.  ದೇವಗಢ ಮೊಗಲರ ವಶವಾಯಿತು.  ಈ ಯುದ್ಧದಲ್ಲಿ ಛತ್ರಸಾಲ ಅಪ್ರತಿಮ ಶೌರ್ಯದಿಂದ ಹೋರಾಡಿದರೂ ಔರಂಗ್eóÉೀಬನಿಂದ ಅವನಿಗೆ ಪ್ರಶಂಸೆಯಾಗಲಿ, ಪುರಸ್ಕಾರವಾಗಲಿ ದೊರೆಯಲಿಲ್ಲ.  ಮುಂದೆ ಅವನು ಔರಂಗ್eóÉೀಬನ ಕಡುವೈರಿಗಳಲ್ಲೊಬ್ಬನಾದ. 

ಬಿಹಾರದ ಸಂಥಾಲ್ ಪರಗಣ ಜಿಲ್ಲೆಯಲ್ಲಿ ಭಾಗಲ್‍ಪುರದಿಂದ 55 ಮೈ.  ದಕ್ಷಿಣದಲ್ಲಿರುವ ದೇವಗಢ ಒಂದು ಯಾತ್ರಾಸ್ಥಳ ಹಾಗೂ ವ್ಯಾಪಾರಕೇಂದ್ರ.  ಇಲ್ಲಿ 34 ಶಿವಮಂದಿರಗಳ ಆಕರ್ಷಕ ಸಮೂಹವಿದೆ.  ಇಲ್ಲಿಗೆ ಭಾರತದ ಎಲ್ಲ ಕಡೆಗಳಿಂದ ಯಾತ್ರಿಕರು ಬರುತ್ತಾರೆ.  ವೈದ್ಯನಾಥ ದೇವಾಲಯ ಇಲ್ಲಿಯ ಪ್ರಸಿದ್ಧ ಮಂದಿರ.  ಭಾರತದ ಪ್ರಸಿದ್ಧ ದ್ವಾದಶಲಿಂಗಗಳಲ್ಲಿ ವೈದ್ಯೇಶ್ವರನದೂ ಒಂದೆಂದು ಭಾವಿಸಲಾಗಿದೆ.  ಈ ಗ್ರಾಮದಲ್ಲಿ ಬೌದ್ಧಕಾಲದ ಅವಶೇಷಗಳು ಕಾಣಸಿಗುತ್ತವೆ.  ಇಲ್ಲಿ ಕಲ್ಲಿದ್ದಲ ನಿಕ್ಷೇಪಗಳಿವೆ.  ಅಕ್ಕಿ, ಬೆಣ್ಣೆ, ಬಾರ್ಲಿ, ಜೋಳ, ಎಣ್ಣೆ, ಸಾಸಿವೆ, ಇತ್ಯಾದಿ ಸಾಮಗ್ರಿಗಳ ವ್ಯಾಪಾರ ಇಲ್ಲಿ  ನಡೆಯುತ್ತದೆ.  ಸಾಹಿತ್ಯ ಭೂಷಣ, ಸಾಹಿತ್ಯಾಲಂಕಾರ ಮುಂತಾದ ಹಿಂದಿ ಪರೀಕ್ಷೆಗಳನ್ನು ನಡೆಸುವ ಪ್ರಸಿದ್ಧ ಹಿಂದೀ ಪ್ರಚಾರ ಸಭೆಯೊಂದು ಇಲ್ಲಿದೆ. 
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ